ಕೇವಲಿ		
ಜೈನಸಿದ್ಧಾಂತದಂತೆ, ಕೇವಲಜ್ಞಾನವನ್ನು ಪಡೆದವ. ಜೀವಾತ್ಮನ ಆಧ್ಯಾತ್ಮ್ಮಿಕ ವಿಕಾಸದ ಹದಿನಾಲ್ಕು ಮೆಟ್ಟಲುಗಳೆನಿಸಿದ ಹದಿನಾಲ್ಕು ಗುಣಸ್ಥಾನಗಳಲ್ಲಿ ಹದಿಮೂರನೆಯ ಸ್ಥಾನವನ್ನು ಸೇರಿದ ಈತನ ಆತ್ಮ ತನ್ನ ಜ್ಞಾನದರ್ಶನಗಳಿಗೆ ಇಂದ್ರಿಯ ಮೊದಲಾದುವುಗಳ ನೆರವನ್ನು ಅಪೇಕ್ಷಿಸುವುದಿಲ್ಲ. ಆಗ ಈತನಲ್ಲಿ ಪರಿಪೂರ್ಣ ಅಥವಾ ಕೇವಲಜ್ಞಾನ ವಿಕಸಿತವಾಗಿರುತ್ತದೆ. ಇವನಿಗೇ ಪರಮಾತ್ಮ ಎಂಬ ಸಂಜ್ಞೆಯೂ ಸಲ್ಲುತ್ತದೆ. ಇನ್ನೂ ದೇಹಧಾರಿಯಾಗಿರುವುದರಿಂದ ಈತ ಕಾಯಯೋಗ ಅಂದರೆ ಶಾರೀರಕ ಕ್ರಿಯೆಗಳ ಮೂಲಕ ಸಯೋಗಿ ಎನಿಸುತ್ತಾನೆ. ಘಾತಿಕರ್ಮಗಳು ನಷ್ಟಹೊಂದಿರುವುದರಿಂದ ಜಿನನಾಗಿರುತ್ತಾನೆ.
(ನೋಡಿ- ಕೇವಲ-ಜ್ಞಾನ)      						
 (ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ